ಕುಂಜತ್ತೂರು, ಎ.೧೨: ನಿಲ್ಲಿಸಿದ್ದ ಲಾರಿಗೆ ಜೀಪೊಂದು ಢಿಕ್ಕಿ ಹೊಡೆದ ಪರಿಣಾಮ ಜೀಪಿನಲ್ಲಿದ್ದ ಪುಟ್ಟ ಬಾಲಕಿಯರಿಬ್ಬರು ಸ್ಥಳದಲ್ಲೇ ಮೃತಪಟ್ಟು, ಓರ್ವ ಮಹಿಳೆ ಗಂಭೀರ ಗಾಯ ಗೊಂಡಿರುವ ಘಟನೆ ಹೊಸಂಗಡಿ ಸಮೀಪದ ವಾಮಂಜೂರು ಚೆಕ್ ಪೋಸ್ಟ್ ಬಳಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಮೃತಪಟ್ಟ ಮಕ್ಕಳನ್ನು ಪೆರ್ಲ ಕಾಟುಕುಕ್ಕೆ ನಿವಾಸಿಗಳಾದ ಅಲಿ ಎಂಬವರ ಒಂದು ವರ್ಷದ ಪುಟ್ಟ ಬಾಲೆ ಅಲ್ಫಿಯಾ ಹಾಗೂ ಉಸ್ಮಾನ್ ಎಂಬವರ ನಾಲ್ಕು ವರ್ಷದ ಪುತ್ರಿ ನೂಹಾನ್ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ಮಹಿಳೆಯೊಬ್ಬರನ್ನು ಮಂಗಳೂರಿನ ಯೂನಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಉರೂಸ್ ಸಮಾರಂಭಕ್ಕೆ ತೆರಳಿ ಹಿಂದಿರುಗಿ ಬರುತ್ತಿರುವಾಗ ಜೀಪಿನ ಟಯರ್ ಸಿಡಿದು ಚೆಕ್ ಪೋಸ್ಟ್‌ನಲ್ಲಿ ನಿಲ್ಲಿಸಲಾಗಿದ್ದ ಮಿನಿ ಲಾರಿಯೊಂದರ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಮಂಗಳೂರು ಶಾಸಕ ಯು.ಟಿ ಖಾದರ್ ಆಸ್ಪತ್ರೆಗೆ ಭೇಟಿ ನೀಡಿ ಮೃತದೇಹದ ಮಹಜರು ಪ್ರಕ್ರಿಯೆಗೆ ಸಹಕರಿಸಿದ್ದಾರೆ.